ಯುಗಪುರುಷದಲ್ಲಿ 35 ವರ್ಷದಿಂದ ಹರಿಕಥಾ ಸಪ್ತಾಹ ನಡೆಸಿದ್ದರು.
ಕರಾವಳಿಯ ಭಾಗದ ಕಿನ್ನಿಗೋಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಸುಶ್ರಾವ್ಯವಾಗಿ ಕೀರ್ತನೆಗಳನ್ನೂ ದಾಸರ ಹಾಡುಗಳೊಂದಿಗೆ ರಾಮಾಯಣ, ಮಹಾಭಾರತ, ಸಾಮಾಜಿಕ ಕಥಾನಕಗಳನ್ನು ವಿಶಿಷ್ಠವಾಗಿ ತನ್ನ ವಾಕ್ಜರಿಯ ಮೂಲಕ ಪದ್ಯಗಳಿಂದ ಪಸರಿಸುತ್ತಿದ್ದ ಹರಿಕಥೆಯ ವಿದ್ವಾನ್ ಸಂತ ಭದ್ರಗಿರಿ ಅಚ್ಯುತದಾಸರು ಇನ್ನು ಕಿನ್ನಿಗೋಳಿ ಪರಿಸರಕ್ಕೆ ನೆನಪು ಮಾತ್ರ.
ಕಿನ್ನಿಗೋಳಿಯ ಸಾಂಸ್ಕೃತಿಕ ಕಲಾಕೇಂದ್ರವೆಂದೇ ಪ್ರಸಿದ್ಧಿ ಪಡೆದಿರುವ "ಯುಗಪುರುಷ" ಸಂಸ್ಥೆಯ ಸಂಯೋಜನೆಯಲ್ಲಿ ಸಂತ ಭದ್ರಗಿರಿ ಅಚ್ಯುತದಾಸರು ಹರಿಕಥೆಯ ಸಪ್ತಾಹವನ್ನು ಕಳೆದ ೩೫ ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ವಾರದ ಏಳೂ ದಿನದಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಪ್ರಾರಂಭವಾಗುತ್ತಿದ್ದ ಈ ಹರಿ ಕಥಾ ಕಾಲಕ್ಷೇಪಕ್ಕೆ ಅಸಂಖ್ಯಾತ ಅಭಿಮಾನಿಗಳು ಸೃಷ್ಟಿಯಾಗಿದ್ದರಲ್ಲದೇ ಯುಗಪುರುಷ ಸಭಾಭವನ ತುಂಬಿ ತುಳುಕುತ್ತಿತ್ತು ಎಂದು ಯುಗಪುರುಷದ ವ್ಯವಸ್ಥಾಪಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ನೆನಪಿಸಿಕೊಳ್ಳುತ್ತಾರೆ.
ಪ್ರತೀ ವರ್ಷವು ನಡೆಸುವ ಈ ಹರಿಕಥೆಯ ಸಪ್ತಾಹಕ್ಕೆ ಬಹಳಷ್ಟು ಅಭಿಮಾನಿಗಳು ದೂರದ ಊರಿನಿಂದಲೂ ಆಗಮಿಸುತ್ತಿದ್ದರು. ದಿ.ಕೋ.ಅ.ಉಡುಪರು ಆರಂಭಿಸಿದ ಭದ್ರಗಿರಿ ಅಚ್ಯುತದಾಸರ ಈ ಹರಿಕಥಾ ಕಾಲಕ್ಷೇಪದ ಸಪ್ತಾಹವನ್ನು ಉಡುಪರ ಮಗನಾದ ಭುವನಾಭಿರಾಮ ಉಡುಪರು ಸಹ ಮುಂದುವರಿಸಿಕೊಂಡು ಬಂದುದರಿಂದ ಈ ಭಾಗದಲ್ಲಿ ಕರಾವಳಿಯ ಏಕೈಕ ದಾಸರ ಕಥಾನಕಗಳನ್ನು ಆಸ್ವಾದಿಸುವ ಕೇಂದ್ರವಾಗಿ ಯುಗಪುರುಷ ಮೂಡಿಬಂದಿತು. ಹಾಗೂ ಅವರ ದಾಸರ ವಾಣಿಯನ್ನು ಆಲಿಸಲು ಅವಕಾಶವೂ ಒದಗಿತ್ತು. ಅಲ್ಲದೇ ದಿ.ಕೋ.ಅ.ಉಡುಪ ಸಂಸ್ಮರಣಾ ಪ್ರಶಸ್ತಿಯೂ ಸಹ ಅವರನ್ನು ಆವರಿಸಿಕೊಂಡಿದ್ದು ವಿಶೇಷ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅಚ್ಯುತದಾಸರ ಅಭಿಮಾನಿ ಹರಿಕೃಷ್ಣ ಪುನರೂರು ಹೇಳುತ್ತಾರೆ.
ಪ್ರತೀ ವರ್ಷ ಸಪ್ತಾಹಕ್ಕೆ ಆಗಮಿಸುವ ಅಚ್ಯುತದಾಸರು ಕಿನ್ನಿಗೋಳಿ ಪರಿಸರದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕಿನ್ನಿಗೋಳಿಯ ಪ್ರಸಿದ್ಧ ಜವಳಿ ವರ್ತಕ ಸಂಸ್ಥೆಯಾದ ಸಂಜೀವರಾವ್ ಅಂಡ್ ಸನ್ಸ್‌ರವರ ಯಶವಂತರಾವ್‌ರವರ ಮನೆಯಲ್ಲಿ ಹಾಗೂ ಕೆಲವೊಮ್ಮೆ ಮೂಡಬಿದಿರೆಯ ಬಳಿಯ ತಮ್ಮ ಮಗಳ ಮನೆಯಲ್ಲಿ ಉಳಿದುಕೊಂಡು ಸಪ್ತಾಹದ ಪ್ರತೀ ದಿನವು ನಿಷ್ಠೆಯಿಂದ ಸಮಯಕ್ಕೆ ಮಹತ್ವ ಕೊಟ್ಟು ಯುಗಪುರುಷಕ್ಕೆ ಆಗಮಿಸಿ ಹರಿಕಥೆಯನ್ನು ನಡೆಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು.
ತಮ್ಮ ವಾಕ್ ಸಾiರ್ಥ್ಯ, ಸುಶ್ರಾವ್ಯ ಗೀತಾ ಪಠಣ, ಸಂಗೀತ, ಸಾಮಾಜಿಕ ಕಥಾನಕಗಳನ್ನು ಜೀವನದಲ್ಲಿನ ಕ್ಷಣಗಳಾಗಿ ಹಾಸ್ಯ ಚಟಾಕಿಗಳು, ಕೆಲವೊಮ್ಮೆ ರಾಜಕೀಯವನ್ನು ಹದವಾಗಿ ಬೆರೆಸುವ, ಕೊಂಕಣಿ, ತುಳು, ಕನ್ನಡ, ಮರಾಠಿಯ ಬಹುಭಾಷೆಯನ್ನು ಬೆರೆಸುವ ಗುಣ ವಿಶೇಷತೆ, ಪುರಾಣಗಳ ತಾತ್ವಿಕತೆ, ಜನರ ಮನಮುಟ್ಟುವ ಉಪಕಥೆಗಳು, ಅಚ್ಯುತದಾಸರ ಹರಿಕಥೆಯಲ್ಲಿ ಒಳಗೊಂಡಿದ್ದರಿಂದ ಎಲ್ಲಾ ವರ್ಗದ ಅಭಿಮಾನಿಗಳನ್ನು ಅವರು ಸೆಳೆದಿದ್ದರು.
ಭದ್ರಗಿರಿ ಅಚ್ಯುತದಾಸರ ಮೃತಕ್ಕೆ ಸಚಿವ ಅಬಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲು, ಕಟೀಲು ದೇವಳದ ಪ್ರಧಾನ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ಯಕ್ಷಲಹರಿಯ ಇ.ಶ್ರೀನಿವಾಸ ಭಟ್, ವಿಜಯ ಕಲಾವಿದರ ಶರತ್ ಶೆಟ್ಟಿ, ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ, ದೇವಪ್ರಸಾದ್ ಪುನರೂರು ಇನ್ನಿತರ ಅಸಂಖ್ಯಾತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.





No comments:
Post a Comment