Wednesday, 21 December 2011

ಡಿಸೆಂಬರ್ ತಿಂಗಳ ಯುಗಪುರುಷ ಸಂಪಾದಕೀಯ

ಸಂಪಾದಕೀಯ
ನೇರ ದಾರಿಯಲ್ಲಿ ಕೂಡಿಸಿದ, ಸತ್ಯ ಹಾಗೂ ನ್ಯಾಯದ ರೀತಿಯಲ್ಲಿ ಗಳಿಸಿದ ಹೆರವರ ತೊಂದರೆಗೆ ಕಾರಣವಲ್ಲದ ಸಂಪತ್ತು ಪವಿತ್ರ ಹಾಗೂ ಸುಖಕರವೆನ್ನಲಾಗಿದೆ. ಅಂದರೆ ಅಡ್ಡದಾರಿಯ ಗಳಿಕೆ. ಇತರರ ಕೇಡಿಗೆ ಮೂಲವಾದ ಸಂಪಾದನೆ, ಬೇರೆಯವರನ್ನು ವಂಚಿಸಿ ಕೂಡಿಸಿದ ರೊಕ್ಕ, ಮೋಸದ ಹಣ ಪಾಪ ಪೂರ್ಣ ಅಂತೆಯೇ ದುಃಖಕರವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂತಹ ಪಾವನ ಧನವನ್ನು ದಾನಧರ್ಮಕ್ಕಾಗಿ, ಸೇವೆ, ಶುಶ್ರೂಶೆಗಳಿಗಾಗಿ ಸದ್ವನಿಯೋಗಿಸುವವನೇ ನಿಜವಾದ ಧನಿಕ ಅಂದರೆ ಸಿರಿವಂತ. ಇಂತಹವನಿಗೆ ಈ ಸಂಪತ್ತು ವರದಾನವೆನ್ನಿಸಿ ಸುಖಸಂತೋಷಗಳಿಗೆ ಮೂಲ ಕಾರಣವಾದೀತು.
ಆದರೆ ಸುಳ್ಳು ಹೇಳಿ ಕೇಡು ಬಗೆದು ಕಳವು ಗೈದು, ಮೋಸವೆಸಗಿ ಸೊತ್ತಿನಲ್ಲಿ ಕಲಬೆರಕೆ ಮಾಡಿ ಗಳಿಸಿದ ಸಂಪತ್ತು ದುಗುಡ ದುಮ್ಮಾನಗಳಿಗೆ ಅಕ್ಕರೆಯ ಕರೆ. ಅಭಿಶಾಪಕ್ಕೆ ಆತ್ಮೀಯ ಆಮಂತ್ರಣ. ನಿಜವಾಗಿಯಾದರೆ  ಹಿರಿಮೆ ಗರಿಮೆಗಳೆಲ್ಲ ಬರುವುದು ನಮ್ಮ ನಿರ್ಮಲವಾದ ನಡೆ-ನುಡಿಗಳಿಂದ ಅಂತೆಯೇ ಧರ್ಮನಿಷ್ಠ ತ್ಯಾಗದಿಂದ. ಬರೇ ಸಿರಿ ರಕ್ಕಸರ ಬಳಿಯೂ ಹೇರಳ ಇರುತ್ತದೆ. ಕಳ್ಳಕಾಕರ ಹಾಗೂ ದರೋಡೆಕೋರರ ಹತ್ತಿರವೂ ಬೇಕಾದಷ್ಟಿರುತ್ತದೆ.
ಆದರೆ ನಿಜವಾದ ಸಂಪತ್ತಿಗೆ ಪವಿತ್ರತೆಯ ಹೊಂಗಳೆ ಮೆರೆಯುವುದು, ಧರ್ಮನಿಷ್ಠೆ, ತ್ಯಾಗತತ್ಪರತೆ ಮತ್ತು ಸದಾಚಾರ ಪ್ರವೃತ್ತಿಗಳಿಂದ ಆ ಧರ್ಮ ನಿಯಂತ್ರಣಕ್ಕೊಳಪಡದ ಸಂಪತ್ತು ಭ್ರಷ್ಟಾಚಾರ ಹಾಗೂ ಅತ್ಯಾಚಾರದಿಂದ ಗಳಿಸಿದ ರೊಕ್ಕ. ಅಂತೆಯೇ ಸಿರಿ ಎಲ್ಲಿರುತ್ತದೋ ಅಲ್ಲಿ ಪಾಪಕೂಪ ಕಲ್ಮಶದ ಕೊಳೆಯಿಂದ ನಾರುತ್ತದೆ. ಅಲ್ಲಿ ನೈತಿಕ ಪತನವಂತೂ ಕಟ್ಟಿಟ್ಟ ಗಂಟಾಗಿ ಕಾಣಿಸುತ್ತದೆ.
ಹಾಗಂತ ಸಿರಿವಂತರಿಗೆ ಸಮಾಜದಲ್ಲಿ ಸಿಗುವ ಗೌರವಾದರಗಳು ಸ್ಥಾನಮಾನಗಳು ಮಹತ್ತ್ವ ಪೂರ್ಣ ಹೌದು. ಸಾಕಷ್ಟು ಹಣವಿದ್ದಾಗ ಎಂತಹ ಘನಘೋರ ಅತ್ಯಾಚಾರ ಮಾಡಿದರೂ ಭ್ರಷ್ಟಾಚಾರ ಗೈದರೂ ಆತ ಸದಾಚಾರಿಯಾಗಿ ಶಿಷ್ಟಾಚಾರಿಯೆನ್ನಿಸಿ ಖ್ಯಾತಿ ಗಳಿಸಬಹುದು ನಿಜ. ಆದರೆ ಇದರಿಂದ ಕಳವು ಸುಲಿಗೆ ದರೋಡೆ ಗೌರವದ ಸಂಗತಿಯಾಗುತ್ತದೆ ಎಂಬುದನ್ನು ಮಾತ್ರ ಮರೆಯಲಾಗದು. ಹಾಗಾಗಿ ಒಬ್ಬನ ಸಿರಿ ಎಂದೆಂದೂ ಆತನ ಗೌರವದ ಮಾನದಂಡವಾಗಬಾರದು. ತ್ಯಾಗ ಸದಾಚಾರ ಹಾಗೂ ಧರ್ಮನಿಷ್ಠೆಯೇ ಸ್ಥಾನಮಾನಗಳನ್ನೀಯುವ ಸಾಧನವಾಗಬೇಕಾಗಿದೆ. ಅದರಲ್ಲೂ ನಮ್ಮಲ್ಲಿರುವ ಸಿರಿ ಭಗವತ್ ಸೇವೆಗಾಗಿ, ಜನತಾ ಜನಾರ್ದನನ ಅರ್ಚನೆಗಾಗಿ, ದೀನದಲಿತರ  ಆರಾಧನೆಗಾಗಿ, ರೋಗ ರುಜಿನಗಳ ನಿವಾರಣೆಗಾಗಿ ಮುಡಿಪಾಗಿರುವಂತಾಗಬೇಕಾಗಿದೆ. ಆಗಲೇ ನಮಗೂ ನಮ್ಮ ಸಿರಿಗೂ ಸಾರ್ಥಕ್ಯ.

No comments:

Post a Comment